ಜಂಜಡ ಝಂಝಾವಾತ -
ಕ್ರಿ. ಶ. 1770ರ ಅನಂತರದ ದಶಕದಲ್ಲಿ ಜರ್ಮನಿಯ ಕೆಲವು ತರುಣ ಕವಿಗಳು ಹೂಡಿದ ಸಾಹಿತ್ಯ ಚಳವಳಿಗೆ ಈ ಹೆಸರಿದೆ. ಇದಕ್ಕೆ ಮೂಲವಾದ ಜರ್ಮನ್ ಪದ ಷ್ಟುರ್ಮ್ ಉನ್ಟ್ ಡ್ರಾಂಗ್ ಎಂದು. ಈ ಚಳವಳಿಗೆ ಬೆಂಬಲ ಕೊಟ್ಟ ಜರ್ಮನಿಯ ಕವಿಶ್ರೇಷ್ಠ ಗಯಟೆಯ ಗಾಟ್ಸ್ ಫಾನ್ ಬರ್ಲಿಕಿಂಗರ್ನ ಎಂಬ ಕೃತಿ 1773ರಲ್ಲಿ ಪ್ರಕಟವಾಯಿತಾದರೂ ಚಳವಳಿಗೆ ಹೆಸರು ಬಂದದ್ದು ಎಫ್. ಎಮ್. ಕ್ಲಿಂಗರ್ ರಚಿಸಿದ ರೂಪಕದ ಉಪನಾಮದಿಂದ. ಅದರ ಪೂರ್ತಿ ಹೆಸರು ವಿರ್‍ವಾರ್ ಓಡರ್ ಷ್ಟುರ್ಮ್ ಉನ್ಟ್ ಡ್ರಾಂಗ್ (1776). 1781ರಲ್ಲಿ ಪ್ರಕಟವಾದ ಷಿಲ್ಲರನ ಡಿ ರಾಬರ್ ಕೂಡ ಇದೇ ಮನೋಧರ್ಮವನ್ನು ಪ್ರದರ್ಶಿಸುವ ನಾಟಕ.

	ಷ್ಟುರ್ಮ್ ಉನ್ಟ್ ಡ್ರಾಂಗ್ ಚಳವಳಿ ಬೋಧಿಸಿದ ಮುಖ್ಯಾಭಿಪ್ರಾಯಗಳು ಇವು; ಎದೆಯ ರಾಗಗಳಿಗೂ ರಾಗಾವೇಶಕ್ಕೂ ಪ್ರಥಮ ಸ್ಥಾನ ಕೊಡಬೇಕು; ಚೈತನ್ಯಮಯವಾದ ಸ್ವಂತ, ಸ್ವತಂತ್ರ ಬಾಳನ್ನು ಬಾಳಬೇಕು. ಪುರುಷ ತನ್ನತನವನ್ನು ಅರಿತು ರೂಢಿಸಿಕೊಂಡು ತೇಜಸ್ಸಿನಿಂದ ಮೆರೆಯದಿದ್ದರೆ ವ್ಯರ್ಥ. ತರ್ಕ ವಿವೇಚನೆಯನ್ನು ಬದಿಗಿಟ್ಟು ಸಮಯಸ್ಫೂರ್ತಿ ಅಂತರ್ಬೋಧೆಗಳು ಸೂಚಿಸುವುದನ್ನು ಹಿಡಿಯತಕ್ಕದ್ದು; ಅದರಂತೆ ನಡೆಯತಕ್ಕದ್ದು ಅನಧೀನತೆ ಮನುಷ್ಯನಿಗೆ ಆಜನ್ಮಸಿದ್ಧವಾದ ಹಕ್ಕು. ಈ ಪಾಠಕ್ಕೆ ಸಿಕ್ಕಿದ ಸಾಹಿತಿಗಳ ಕೃತಿಯ ಹಣೆಯ ಮೇಲೆ ಒಂದೊ ಅಥವಾ ಇನ್ನೊಂದೊ ಲಾಂಛನ ಇದ್ದೇ ಇರುತ್ತಿತ್ತು. ಮಿತಿಮೀರಿ ಕುದಿದೆದ್ದ ರಾಗಸಮುಚ್ಚಯದ ಗರ್ವಿತ ರಭಸ; ಅಥವಾ ಮರುಕ ಭಿಕ್ಷೆಯನ್ನು ಬೇಡುವ ಹೀನ ದೈನ್ಯದ ದೌರ್ಬಲ್ಯ. ಅದು ಆತ್ಮಶಕ್ತಿಯ ವೈಪರೀತ್ಯ. ಇದು ಅದರ ಅಭಾವ. ಎರಡನೆಯ ಜಾಯಮಾನವನ್ನು ಅತಿ ಸ್ಪಷ್ಟವಾಗಿ ಅತಿ ಚೆಲುವಾಗಿ ಪ್ರಭಾವಯುಕ್ತವಾಗುವಂತೆ ಗಯಟೆ ತನ್ನ ಕಾದಂಬರಿ ಸಾರೋಸ್ ಆಫ್ ವರ್ದರ್‍ನಲ್ಲಿ ನಿರೂಪಿಸಿದ. ಗಯಟೆಗೇ ಆ ಪ್ರವೃತ್ತಿ ಒಂದು ಮನೋವ್ಯಾಧಿಯಂತೆ ತೋರಿ ಬಂತು. ಅದನ್ನು ಕಳೆದುಕೊಳ್ಳುವುದಾಗಿ ಅವನು ಆ ಕಾದಂಬರಿಯನ್ನು ಹೊರಗೆಡಹಿದನಂತೆ, ಇರಬಹುದು. ಆದರೂ ವರ್ದರನ ನೆಳಲು ಹಲವು ದೇಶಗಳ ಕವಿಗಳ ಮೇಲೆ ಹಲವು ಸಂವತ್ಸರ ದಪ್ಪವಾಗಿಯೇ ಬಿದ್ದಿತ್ತು. ವರ್ದರಿಸಮ್ ಎಂಬುದೂ ಈಗಲೂ ಒಂದು ಪಡೆಮಾತಾಗಿದೆ.

	ಈ ಚಳವಳಿಗೆ ಹಿಂದೆ 1770ರ ವರೆಗೂ ಜರ್ಮನಿಯ ವಿದ್ಯಾವಂತರು ವಿವೇಕ ವಿವೇಚನೆಗಳೇ ಪ್ರಧಾನ ಲಕ್ಷಣವಾದ ಡಿ ಔಫ್‍ಕ್ಲೇರುಂಗ್ ಎಂಬ ತತ್ತ್ವ ದರ್ಶನದ ಹಿಂಬಾಲಕರಾಗಿದ್ದರು. ಅದರ ಉಪದೇಶದಂತೆ ವಿಶ್ವಕ್ಕೊಂದು ಕ್ರಮವರಿತ ವಿನ್ಯಾಸವಿದೆ. ಬುದ್ಧಿಯಿಂದ ತರ್ಕದ ಮೂಲಕ ಅದರ ನಕ್ಷೆಯನ್ನು ಗೊತ್ತು ಮಾಡಬಹುದು. ಜೀವನದಲ್ಲೂ ಸಾಹಿತ್ಯ ನಿರ್ಮಾಣದಲ್ಲೂ ನಿಯತ ಸೂತ್ರಗಳನ್ನು ಅನುಸರಿಸಬೇಕು. ರಾಗಗಳನ್ನೂ ಕಲ್ಪನೆಗಳನ್ನೂ ಹತೋಟಿಯಲ್ಲಿಡಬೇಕು. ಆಗಿನ ಕಾಲಕ್ಕೆ ಈ ವಿಷಯದಲ್ಲಿ ಫ್ರಾನ್ಸ್ ಜರ್ಮನಿಗೆ ಮಾರ್ಗದರ್ಶಿಯಾಗಿತ್ತು. 1770ರ ತರುವಾಯ ಈ ತತ್ತ್ವಕ್ಕೆ ಬಲವಾದ ಪ್ರತಿಭಟನೆ ಪ್ರಾರಂಭವಾಯಿತು. ತತ್ತ್ವಶಾಸ್ತ್ರ, ಮತ ಧರ್ಮಗಳ ವಿಚಾರ ನಮಗೆ ಬೇಡ ಎಂದು ಕೆಲವರು ಅನ್ನತೊಡಗಿದರು. ಅಂದು ಸಾಹಿತ್ಯಕ್ಷೇತ್ರದಲ್ಲಿ ಜೆ.ಜಿ.ಫಾನ್ ಹರ್ಡರ್ ಎಂಬ ವಿಮರ್ಶಕ ನಾನಾ ದೇಶಗಳ ಜನಪದ ಲಾವಣಿಗಳನ್ನು ಸಂಗ್ರಹಿಸಿ, ಜರ್ಮನ್ ಭಾಷೆಗೆ ತರ್ಜುಮೆ ಮಾಡಿದ್ದನಷ್ಟೆ. ಕವಿಗಳಿಗೆ ಅವು ಹೊಸದಾದ ಒಂದು ಕಣ್ಣನ್ನು ತಂದುಕೊಟ್ಟುವು ಹಾಗೂ ಫ್ರಾನ್ಸಿನ ಸಾಂಸ್ಕøತಿಕ ಮುಂದಾಳಾದ ರೂಸೊ ಹೃದಯದ ಭಾವಗಳೂ ಪ್ರಕೃತಿಸಹಜವಾದ ಬದುಕೂ ಬರಿ ಬುದ್ಧಿವಿವೇಕಕ್ಕಿಂತ, ಅದರ ಕಟ್ಟು ಪಾಡುಗಳಿಗಿಂತ ಎಷ್ಟೋ ಮೇಲು ಎಂದು ಸಾರಿ ಯುವಕರ ಆಳ್ತನವನ್ನು ಕೆರಳಿಸಿ ಕುದುರಿಸಿದ.

	ಇಬ್ಬರು ವಿನಾ ಈ ಹೊಸ ಚಳವಳಿಯಲ್ಲಿ ಭಾಗವಹಿಸಿದ ಜರ್ಮನ್ ಕವಿಗಳಾರೂ ಪ್ರಖ್ಯಾತರಾಗಲಿಲ್ಲ. ಲೆನ್ಜ್ ಎಂಬಾತ ಹುಚ್ಚರ ಆಸ್ಪ್ರತೆಯಲ್ಲಿ ಮೃತನಾದ. ಬರ್ಗರ್ ಕೂಡ ಒಂದೇ ಒಂದು ಕವನದಿಂದ (ಲುನೋರೆ) ಉಳಿದುಬಂದಿದ್ದಾನೆ. ನಿಜವಾಗಿ ಕ್ರಾಂತಿ ಎಲ್ಲರ ಗಮನವನ್ನೂ ಸೆಳೆದು, ಇತರ ಯೂರೋಪಿನ ಪ್ರಾಂತಗಳಲ್ಲೂ ಅನುಕರಣೆಯನ್ನು ಪ್ರೇರಿಸಿದ್ದಕ್ಕೆ ಕಾರಣಭೂತರಾದವರು ಗಯಟೆ ಮತ್ತು ಪಿ.ಆರ್. ಅವರಿಬ್ಬರೂ ಮಹಾಮೇಧಾವಿಗಳು, ಪ್ರಚಂಡ ಪ್ರತಿಭಾವಂತರು. ಆದರೆ ಆ ಬಿರುಗಾಳಿಯ ಗಲಿಬಿಲಿಯಿಂದ ಅವರಿಬ್ಬರೂ ಹತ್ತೆಂಟು ಸಂವತ್ಸರಗಳಲ್ಲೇ ಪಾರಾಗಿ ಚಿತ್ತಸ್ವಾಸ್ಥ್ಯದ ಕಡೆಗೆ ತಿರುಗಿದರು. ಹೀಗಾದರೂ ಚಳವಳಿಯ ಅವಾಂತರ ಅನೇಕ ದಿಕ್ಕಿಗೆ ಹಬ್ಬಿ ಹಲವು ದಶಕಗಳ ಕಾಲ ಸಾಹಿತಿಗಳಿಗೆ ತನ್ನದೇ ಆದ ಸ್ಫೂರ್ತಿಯನ್ನೂ ಉತ್ತೇಜನವನ್ನೂ ಒದಗಿಸುತ್ತ ಹೋಯಿತು. ರೋಮ್ಯಾಂಟಿಕ್ ಪದ್ಧತಿಯೆಂಬುದು ಸಾಹಿತ್ಯದಲ್ಲಿ ಹುಟ್ಟುವುದಕ್ಕೆ ಪೂರ್ವ ಸಿದ್ಧತೆಗಳನ್ನು ಈ ಚಳವಳಿ ಮಾಡಿತು ಎಂಬುದು ಮುಖ್ಯ.
(ಎಸ್.ವಿ.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ